Ambulance strike : ಮುಷ್ಕರದಿಂದ ಹಿಂದೆ ಸರಿದ 108 ಆರೋಗ್ಯ ಕವಚ ಸಿಬ್ಬಂದಿಗಳು, ಸಚಿವರ ಮಾತುಕತೆ ಯಶಸ್ವಿ

Ambulance strike : ಮುಷ್ಕರದಿಂದ ಹಿಂದೆ ಸರಿದ 108 ಆರೋಗ್ಯ ಕವಚ ಸಿಬ್ಬಂದಿಗಳು, ಸಚಿವರ ಮಾತುಕತೆ ಯಶಸ್ವಿ
Spread the love

ಬೆಂಗಳೂರು ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸುವಂತೆ ಒತ್ತಾಯಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮಂಗಳವಾರ ರಾತ್ರಿಯಿಂದ ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ. ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳು 108-ಆರೋಗ್ಯ ಕವಚ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಮುಷ್ಕರವನ್ನು ಹಿಂಪಡೆದಿದ್ದಾರೆ.

ಈ ಮೊದಲು ಎರಡು ದಿನ ಮುಷ್ಕರವನ್ನು ಮುಂದೂಡಲಾಗಿತ್ತು. ಏಪ್ರಿಲ್ 6, ಸೋಮವಾರ ರಾತ್ರಿ 8 ಗಂಟೆಯಿಂದ ಮುಷ್ಕರವನ್ನು ಆರಂಭಿಸುವುದಾಗಿ ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗಳ ಸಂಘ ಭಾನುವಾರ ಗಡುವು ನೀಡಿತ್ತು.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು, ತಾವು ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳು ಚುನಾವಣಾ ಕಾರ್ಯಕ್ಕಾಗಿ ಹೊರ ರಾಜ್ಯಗಳಿಗೆ ತೆರಳಿದ್ದಾರೆ. ಅವರು ಮಂಗಳವಾರ ಬೆಂಗಳೂರಿಗೆ ಬಂದ ನಂತರ ಚರ್ಚಿಸಿ ಬಗೆಹರಿಸುವುದಾಗಿ ಸಚಿವರು ತಿಳಿಸಿದ್ದರು. ಆದ್ದರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮಂಗಳವಾರ ರಾತ್ರಿವರೆಗೆ ತಾತ್ಕಾಲಿಕವಾಗಿ ಮುಂದೂಡಿದ್ದರು.

ಅದರಂತೆ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು, ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು 108 ಆರೋಗ್ಯ ಕವಚ ನೌಕರರ ಸಂಘ ತಿಳಿಸಿದೆ. ಆರೋಗ್ಯ ಸಚಿವರು 108 ಆರೋಗ್ಯ ಕವಚ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಫಲಪ್ರದವಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಸರ್ಕಾರದ ಬಳಿ ಹಣಕಾಸಿನ ಕೊರತೆಯಿಲ್ಲ. ಇಲಾಖೆಯಲ್ಲಿ ಸಾಕಷ್ಟು ಅನುದಾನವಿದೆ.108 ಅಂಬ್ಯುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗೆ ನೀಡಬೇಕಾದ ವೇತನವನ್ನು ನಿಯಮಾನುಸಾರ ಯೋಜನೆಯನ್ನು ನಿರ್ವಹಿಸುತ್ತಿರುವ ಸಂಸ್ಥೆಗೆಪಾವತಿಸಲಾಗಿದೆ.

ಆರೋಗ್ಯ ಕವಚ ಯೋಜನೆಯನ್ನು ನಿರ್ವಹಿಸುತ್ತಿರುವ ಜಿವಿಕೆ ಇಎಂಆರ್ ಸಂಸ್ಥೆಯು ಸಿಬ್ಬಂದಿಗೆ ವೇತನವನ್ನು ಪಾವತಿ ಮಾಡಬೇಕಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಜಿವಿಕೆ ಇಎಂಆರ್ ಏಜೆನ್ಸಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಸರ್ಕಾರ ಯಾವುದೇ ವೇತನ ಮೊತ್ತವನ್ನು ಬಾಕಿ ಉಳಿಸಿಕೊಂಡಿಲ್ಲ. ಹಾಗಾಗಿ ಸರ್ಕಾರ ವೇತನ ನೀಡಿಲ್ಲ ಎಂದು ಆರೋಪ ಮಾಡುವಂತಿಲ್ಲ.ನ್ಯೂನತೆಗಳನ್ನು ಏಜೆನ್ಸಿಯೇ ಸರಿಪಡಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

108 ಆರೋಗ್ಯ ಕವಚ ನೌಕರರ ಇತರೆ ಬೇಡಿಕೆಗಳನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಪೂರ್ಣಗೊಂಡ ನಂತರ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಂಘದ ಪದಾಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡಲಾಗಿದೆ.

ಒಂದು ವೇಳೆ ಈ ಸಮಸ್ಯೆ ಬಗೆಹರಿಯದಿದ್ದರೆ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿದ್ದವು. ಈ ಆರೋಗ್ಯ ಕವಚ ಯೋಜನೆಯನ್ನು ಜಿವಿಕೆ-ಇಎಂಆರ್‌ಐ ಸಂಸ್ಥೆ ನಿರ್ವಹಿಸುತ್ತಿದ್ದು ಸುಮಾರು 2,500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದು ಕಡೆ ನಿಗದಿಪಡಿಸಿದ ವೇತನದಲ್ಲಿ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಅರ್ಧದಷ್ಟು ವೇತನ ಮಾತ್ರ ನೀಡಲಾಗಿದ್ದು, ಕಳೆದ ಮೂರು ತಿಂಗಳಿಂದ ವೇತನ ಪಾವತಿಸಿಲ್ಲ. ಮತ್ತೊಂದು ಕಡೆ ವೇತನವನ್ನು ಕಡಿತಗೊಳಿಸಲಾಗಿದೆ ಎಂದು ನೌಕರರು ಆರೋಪಿಸಿದ್ದರು.

ಕಾಲ ಕಾಲಕ್ಕೆ ಸಂಬಳ ನೀಡದಿರುವುದರಿಂದ ನೌಕರರು ಮತ್ತು ಅವರ ಕುಟುಂಬ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದಸರ್ಕಾರವನ್ನು ಎಚ್ಚರಿಸಲು ಮುಷ್ಕರ ಅನಿವಾರ್ಯ ಎಂದು ಪದಾಧಿಕಾರಿಗಳು ಹೇಳಿದ್ದರು.

 

Comments

No comments yet. Why don’t you start the discussion?

Leave a Reply

Your email address will not be published. Required fields are marked *